ಹೆಬ್ಬಲಸು
		ಮೊರೇಸೀ ಕುಟುಂಬದ ಆರ್ಟೊಕಾರ್ಪಸ್ ಹಿರ್ಸುಟಾ ಪ್ರಭೇದದ ಮರ. ಪಶ್ಚಿಮ ಘಟ್ಟದ ನಿತ್ಯಹರಿದ್ವರ್ಣದ ಕಾಡುಗಳಲ್ಲಿ 1,000ಮೀ ಎತ್ತರದ ಪ್ರದೇಶಗಳಲ್ಲೂ ಕಾಣಬರುತ್ತದೆ. ಉತ್ತರ ಕನ್ನಡ, ಶಿವಮೊಗ್ಗ, ಕೊಡಗು ಜಿಲ್ಲೆಗಳಲ್ಲಿ ಹರಡಿದೆ. ಹೆಚ್ಚು ಮಳೆಬೇಕು. ಪರ್ಣಪಾತಿ ಕಾಡುಗಳಲ್ಲಿ ಅಪರೂಪ. ಘಟ್ಟದ ತಪ್ಪಲಿನ ಜಂಬೆಮಣ್ಣಿನ ಪ್ರದೇಶಗಳಲ್ಲಿ ಹುಲುಸಾಗಿ ಬೆಳೆಯುವುದು. ನಿಂಬೆಹಣ್ಣಿನ ಗಾತ್ರದ ಹಳದಿ ಬಣ್ಣದ ಅಂಡಾಕಾರದ ಇದರ ಹಣ್ಣು ಮೇ-ಜೂನ್‍ನಲ್ಲಿ ಪಕ್ವವಾಗುವುದು. ಕೋತಿಗಳಿಂದ ಇವಕ್ಕೆ ಬಹುಹಾನಿ. ಎಳೆಯ ಸಸಿಗಳನ್ನು ಜಿಂಕೆಗಳು ತಿನ್ನುತ್ತವಾದರೆ, ಆನೆಗಳು ತೊಗಟೆ ಮತ್ತು ಎಲೆಗಳನ್ನು ತಿನ್ನುವುವು. ಬೆಂಕಿಯಿಂದ ಹಾನಿ ಹೆಚ್ಚು. ಕತ್ತರಿಸಿದಾಗ ಮರ ಚೆನ್ನಾಗಿ ಚಿಗುರುವುದು. ಬೇರು ಸಸಿಗಳೂ ಉತ್ಪತ್ತಿಯಾಗುವುವು. ಬೀಜ ಬೇಗ ಮೊಳೆತರೂ ಪ್ರಾಣಿಗಳ ಉಪಟಳದಿಂದ ಸ್ವಾಭಾವಿಕ ಪುನರುತ್ಪತ್ತಿ ಕಡಿಮೆ. ಕೃತಕ ಪುನರುತ್ಪತ್ತಿಗೆ, ಸಸಿಗಳನ್ನು ನಾಟಿಮಾಡಿದಾಗ ಅಷ್ಟು ನಿಶ್ಚಿತವಾಗಿ ಬೆಳೆಯದಿರುವುದರಿಂದ ನೇರಬಿತ್ತನೆ ಅನುಕೂಲ. ಬೆಳೆವಣಿಗೆ ಶೀಘ್ರಗತಿಯದು.  

	ಚೌಬೀನೆ ಹದ ಮಾಡುವುದಕ್ಕೆ, ಕೊಯ್ತಕ್ಕೆ ಮರಗೆಲಸಕ್ಕೆ ಸುಲಭ. ಗಡುಸಾದುದೂ ಬಾಳಿಕೆ ಬರುವಂಥದೂ ಆಗಿರುವುದರಿಂದ ರೈಲ್ವೆ ಕೋಚ್ ತಯಾರಿಕೆ, ಗೃಹನಿರ್ಮಾಣ, ಪೀಠೋಪಕರಣ ತಯಾರಿಕೆ ಇತ್ಯಾದಿಗಳಿಗೆ ಸಾಗುವಾನಿ ಮರಕ್ಕೆ ಸಮ ಎನಿಸಿಕೊಂಡಿದೆ.
												(ಎ.ಕೆ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ